‘ವೀರ ಕಂಬಳ’ ಸಿನಿಮಾದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಟನೆ, ಪಾತ್ರ ಸಸ್ಪೆನ್ಸ್
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವೀರ ಕಂಬಳ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಕನ್ನಡ, ತುಳು ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬರಲಿರುವುದು ವಿಶೇಷ. ಸಂಪೂರ್ಣವಾಗಿ ಕಂಬಳ ಕ್ರೀಡೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ.
ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಕಂಬಳ ಕೋಣ ಓಡಿಸುವುದರಲ್ಲೇ ಪರಿಣಿತಿ ಹೊಂದಿರುವ ಶ್ರೀನಿವಾಸ್ ಗೌಡ ಕೂಡ ಈ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ಇವರೊಂದಿಗೆ ಕಲಾವಿದ ಸ್ವರಾಜ್ ಶೆಟ್ಟಿ ಕೂಡ ಕಂಬಳದ ಕೋಣ ಓಡಿಸುವ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಪ್ರಕಾಶ್, ರವಿಶಂಕರ್, ರಾಧಿಕಾ ಚೇತನ್, ನವೀನ್ ಪಡೀಲ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ.
ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿದ್ದು, ವೀರ ಕಂಬಳ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಈಗ ನಡೆಯುತ್ತಿದೆ. ಈ ಭಾಗದ ಚಿತ್ರೀಕರಣದಲ್ಲಿ ವೀರೇಂದ್ರ ಹೆಗ್ಗಡೆ ಅವರು ಪಾಲ್ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಿಗೆ ಮೇಕಪ್ ಹಚ್ಚುತ್ತಿರುವ ಫೋಟೋಗಳನ್ನು ಹಲವರು ಹಂಚಿಕೊಂಡಿದ್ದಾರೆ. ಆದರೆ, ಯಾವ ರೀತಿಯ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎನ್ನುವುದು ಸಸ್ಪೆನ್ಸ್.