

ಉಪ್ಪಿನಂಗಡಿ: ಶಾಲಾ ವಾರ್ಷಿಕೋತ್ಸವಕ್ಕೆ ತೆರಳಿದ್ದ ಬಾಲಕಿಯನ್ನು ಪರಿಚಯದ ಯುವಕನೋರ್ವ ಮನೆಗೆ ಕರೆದೊಯ್ಯುವುದಾಗಿ ನಂಬಿಸಿ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ನೆಲ್ಯಾಡಿ ಗ್ರಾಮದ ಪುಚ್ಚೇರಿ ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಕ್ಸೊ ಪ್ರಕರಣದಡಿ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಚೇತನ್ ಬಂಧಿತ ಆರೋಪಿ. ಡಿಸೆಂಬರ್ 29ರಂದು ಸಂಜೆ ಸಮೀಪದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ 14ರ ಹರೆಯದ ಬಾಲಕಿಯು ಹೆತ್ತವರು, ತಂಗಿಯ ಜೊತೆಗೆ ತೆರಳಿದ್ದಳು. ಮನೆಮಂದಿ ಅರ್ಧದಲ್ಲೇ ಮನೆಗೆ ಮರಳಿದ್ದು, ಬಾಲಕಿ ವಾರ್ಷಿಕೋತ್ಸವ ಮುಗಿದ ಮೇಲೆ ಮನೆಗೆ ಬರುತ್ತೇನೆಂದು ತಿಳಿಸಿದ್ದಳು.
ಕಾರ್ಯಕ್ರಮ ಮುಗಿದ ಸಂದರ್ಭ ಮನೆ ಸಮೀಪದ ನಿವಾಸಿ ಆರೋಪಿ ಚೇತನ್ ಮನೆಗೆ ತಾನು ಕರೆದೊಯ್ಯುತ್ತೇನೆಂದು ನಂಬಿಸಿ ಬಾಲಕಿಯನ್ನು ತನ್ನ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಆದರೆ ಮನೆಗೆ ಕರೆದೊಯ್ಯುವ ಬದಲು ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಆಕೆಯನ್ನು ಮಧ್ಯರಾತ್ರಿ ಕಾಡಿನಲ್ಲೇ ಬಿಟ್ಟು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.
ಇತ್ತ ಬಾಲಕಿಯನ್ನು ಹೆತ್ತವರು ಹುಡುಕಾಡಿದಾಗ ಗುಡ್ಡದಲ್ಲಿ ಪತ್ತೆಯಾಗಿದ್ದು, ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವಿರುದ್ದ ಪೊಕ್ಸೋ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಶನಿವಾರ ಆತನನ್ನು ಬಂಧಿಸಿದ್ದಾರೆ.