ಇನ್ನು ಮುಂದೆ ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲೂ ತುಳುಭಾಷೆ

ಮಂಗಳೂರು: ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ಇಂದು ಹಲವಾರು ಭಾಷೆಗಳು ನೂತನವಾಗಿ ಸೇರ್ಪಡೆಗೊಂಡಿದೆ. ಜಗತ್ತಿನಾದ್ಯಂತ ಹಲವಾರು ಭಾಷೆಗಳ ಸೇರ್ಪಡೆಯ ನಡುವೆ ಕರಾವಳಿ ಕರ್ನಾಟಕದ ತುಳುಭಾಷೆಗೂ ಮಾನ್ಯತೆ ದೊರಕಿರುವುದು ತುಳುವರಿಗೆ ಹೆಮ್ಮೆಯ ವಿಚಾರವಾಗಿದೆ. ಗೂಗಲ್ ಟ್ರಾನ್ಸ್‌ಲೆಟರ್ ಆ್ಯಪ್‌ನಲ್ಲಿ ಅಪ್ಡೇಟ್ ಮಾಡಿದರೆ, ಅಥವಾ ವೆಬ್‌ಸೈಟ್‌ನಲ್ಲಿ ಸರ್ಚ್ ಮಾಡಿದ್ದಲ್ಲಿ ತುಳು ಭಾಷೆ ಸೇರ್ಪಡೆಯಾಗಿದ್ದು ಗೊತ್ತಾಗುತ್ತದೆ.

ತುಳು ಭಾಷೆಗೆ ಪ್ರತ್ಯೇಕ ಲಿಪಿಯಿದ್ದರೂ, ಈ ಲಿಪಿ ಬಗ್ಗೆ ಹೆಚ್ಚಿನ ತುಳುವರಿಗೆ ಜ್ಞಾನವಿಲ್ಲ. ಸದ್ಯ ಗೂಗಲ್ ಟ್ರಾನ್ಸ್‌ಲೇಟರ್ ತುಳು ಲಿಪಿಯ ಬದಲು ಕನ್ನಡಲಿಪಿಯಲ್ಲಿ ತುಳು ಭಾಷೆಗೆ ಭಾಷಾಂತರವಾಗುತ್ತದೆ. ಇದರಿಂದ ಜಗತ್ತಿನ ಯಾವುದೇ ಭಾಷೆಯಿಂದ ತುಳು ಭಾಷೆಗೆ ನೇರವಾಗಿ ಭಾಷಾಂತರಿಸಲು ಸಾಧ್ಯವಾಗಲಿದೆ. ಈ ಬಗ್ಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಪ್ರತಿಕ್ರಿಯಿಸಿ, ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ತುಳು ಭಾಷೆ ಸೇರ್ಪಡೆ ಆಗಿರುವುದು ತುಳುಭಾಷೆಗೆ ಜಾಗತಿಕವಾಗಿ ಸಂದ ಗೌರವವಾಗಿದೆ. ಇದು ತುಳುವರು ಸಂಭ್ರಮಪಡುವ ವಿಚಾರ. ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ಕೆಲವು ಸಂದರ್ಭ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಮ್ ನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುವುದು. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.

Check Also

ಉಡುಪಿ: ಹೃದಯಾಘಾತದಿಂದ 10ನೇ ತರಗತಿ ವಿದ್ಯಾರ್ಥಿನಿ ಸಾವು..!

ಉಡುಪಿ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಹೃದಯಾಘಾತದಿಂದ 10ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮೂಡಬಳ್ಳೆಯಲ್ಲಿ …

Leave a Reply

Your email address will not be published. Required fields are marked *

You cannot copy content of this page.